Akash
ಒಡಲಾಳ
ದೇವನೂರ ಅವರ ಒಡಲಾಳ ಕಾದಂಬರಿ ಒಂದು ದಲಿತ ಕುಟುಂಬದ ಕಥೆಯ ಮೂಲಕ ಜಮೀನ್ದಾರಿ–ಸಾಹುಕಾರಶಾಹಿ-ಆಡಳಿತಶಾಹಿ ವ್ಯವಸ್ಥೆಗಳು ಪರಸ್ಪರ ಬೆಸೆದುಕೊಂಡು ದಲಿತರ ಬದುಕನ್ನು ಅಂಚಿಗೆ ತಳ್ಳುವ ಬಗೆಯನ್ನು ಚಿತ್ರಿಸುತ್ತದೆ.
ಸಾಕವ್ವನ ಕುಟುಂಬಕ್ಕೆ ನಾಲ್ಕು ಎಕರೆ ಜಮೀನಿದ್ದರೂ, ಮಳೆಯ ಕೊರತೆ ಮತ್ತು ಆರ್ಥಿಕ ಅಸುರಕ್ಷತೆಯಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಮಂಡಕ್ಕಿ- ಕಾಪಿನೀರೇ ಆಹಾರವಾಗುವ ಈ ಬದುಕು “ಭೂಮಿ ಇದ್ದರೂ ಅನ್ನವಿಲ್ಲ” ಎಂಬ ಜಮೀನ್ದಾರಿ ಸಮಾಜದ ವೈರುಧ್ಯವನ್ನು ಸೂಚಿಸುತ್ತದೆ.
ಮನೆಯಲ್ಲಿದ್ದ ನೂಲುವ ರಾಟೆಯೂ ನಿರುಪಯುಕ್ತವಾಗಿ ನೇಣು ಹಾಕಿಕೊಂಡಿರುವುದು ಪಾರಂಪರಿಕ ಜೀವನೋಪಾಯಗಳ ಕುಸಿತದ ಸಂಕೇತವಾಗಿದೆ.
ಇದಕ್ಕೆ ವಿರುದ್ಧವಾಗಿ ಎತ್ತಪ್ಪನವರ ದನದ ಹಟ್ಟಿ, ದವಸ-ಧಾನ್ಯ ಮತ್ತು ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗಿರುವುದು ಆರ್ಥಿಕ ಅಸಮಾನತೆಯನ್ನು ಸ್ಪಷ್ಟಪಡಿಸುತ್ತದೆ. ದಲಿತ ಕುಟುಂಬದ ಹಸಿವು ಎಷ್ಟರಮಟ್ಟಿಗೆ ತೀವ್ರವೆಂದರೆ, ಎತ್ತಪ್ಪನ ಒಂದು ದನ ಸತ್ತರೂ ಇಡೀ ಕೇರಿಯ ಹಸಿವು ನೀಗಬಹುದು ಎಂಬ ಕಲ್ಪನೆಯೇ ಶೋಷಣೆಯ ಕ್ರೌರ್ಯವನ್ನು ಬಿಂಬಿಸುತ್ತದೆ.
ಕಾಳಣ್ಣ ಕಡಲೆಕಾಯಿ ಕದಿಯುವುದು ವ್ಯಕ್ತಿಗತ ಅಪರಾಧವೆಂದು ಮಾತ್ರ ನೋಡಲಾಗದು. ಹಸಿವಿನಿಂದ ಬಳಲುವ ಕುಟುಂಬವನ್ನು ವ್ಯವಸ್ಥೆಯೇ ಕಳ್ಳತನದತ್ತ ತಳ್ಳುತ್ತದೆ. ಕದ್ದ ಕಡಲೆಕಾಯಿಯನ್ನು ಇಡೀ ಕುಟುಂಬ ಮತ್ತು ನೆರೆಹೊರೆಯವರು ಹಂಚಿಕೊಂಡು ತಿನ್ನುವ ಪ್ರಸಂಗೆ ಅಪರಾಧದ ಹಿಂದೆ ಅಡಗಿರುವ ಸಾಮಾಜಿಕ ಹಸಿವನ್ನು ಬಯಲಿಗೆಳೆಯುತ್ತದೆ.
ಹೀಗಾಗಿ ದೇವನೂರು ಅವರು ಕಳ್ಳನನ್ನು ಮಾತ್ರ ತೋರಿಸುವುದಿಲ್ಲ ಕಳ್ಳತನವನ್ನು ಸೃಷ್ಟಿಸುವ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಾರೆ.
17 · 4.5K ·